ಕಾರ್ಗಿಲ್ ಕದನವೀರರು - 9

ಮದುವೆಯಾಗಿ ಇನ್ನೂ ಹತ್ತು ತಿಂಗಳು ಕೂಡ ಕಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೆಚ್ಚಿನ ಮಡದಿಯಿಂದ ಪತ್ರವೊಂದು ಬಂದರೆ ಅದನ್ನು ತತ್ ಕ್ಷಣ ತೆರೆದೋದಬೇಕೆಂಬ ಕಾತರ ಯಾರಿಗೆ ತಾನೇ ಇರುವುದಿಲ್ಲ? 29ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ ಹದಿನಾರು ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಿನಲ್ಲಿದ್ದ. ಒಂದು ಕೈಯಲ್ಲಿ ಭೂಪಟ ಇನ್ನೊಂದರಲ್ಲಿ ಎ.ಕೆ -47 ರೈಫಲ್. ತೊಲೊಲಿಂಗ್ ಪರ್ವತದೆತ್ತರದಲ್ಲಿ ಪಾಕ್ ಅತಿಕ್ರಮಣಕಾರರು ಕಟ್ಟಿಕೊಂಡಿದ್ದ ಬಂಕರ್ ಧ್ವಂಸ ಮಾಡುವುದು ರಾಜೇಶ್ ಅಧಿಕಾರಿಯ ಗುರಿಯಾಗಿತ್ತು. "ಅರೆ, ಈಗ ಪುರುಸೊತ್ತಿಲ್ಲ ನಾಳೆ ಕಾರ್ಯಾಚರಣೆ ಮುಗಿದ ಬಳಿಕ ಇದನ್ನು ಆರಾಮವಾಗಿ ಓದೋಣ" ಎಂದು ಹೆಂಡತಿಯ ಕಾಗದವನ್ನು ಮಡಿಚಿ ಭದ್ರವಾಗಿ ಜೇಬೊಳಗಿಟ್ಟ. ಕಡಿದಾದ ಕೊಡಲಿಯ ಮೊನೆಯಂತಹ ಹಿಮಬಂಡೆಗಳನ್ನು ದಾಟುತ್ತಾ ಅಧಿಕಾರಿ ಹಾಗೂ ಆತನ ತಂಡ ನಿಶ್ಚಿತ ಗುರಿ ತಲುಪಿದ ಕೂಡಲೇ ಶತ್ರು ಪಡೆಯತ್ತ ಗುಂಡು ಹಾರಿಸತೊಡಗಿದರು. ವೈರಿ ಪಡೆಯ ಬಂಕರ್ ಈ ದಾಳಿಗೆ ಕುಸಿದು ಬಿತ್ತು. ಆದರೆ ಅಷ್ಟರಲ್ಲಿ ಗುಂಡೊಂದು ಎಗರಿ ಬಂದು ಅಧಿಕಾರಿಯ ಎದೆಯನ್ನು ಸೀಳಿತು. ಆತ ಧರಾಶಾಯಿಯಾದ. ನೈನಿತಾಲ್ ನಲ್ಲಿರುವ ಮನೆಗೆ ಅಧಿಕಾರಿಯ ಪಾರ್ಥಿವ ಶರೀರ ತಲುಪಿದ್ದು ಇದಾಗಿ ಒಂದು ವಾರ ನಂತರ. ಉತ್ತರಪ್ರದೇಶ ಗಢವಾಲದಲ್ಲಿರುವ ಪ್ರತಿ ಮೂರನೇ ಮನೆಯಿಂದ ಒಬ್ಬ ಸೈನ್ಯಕ್ಕೆ ಸೇರಿದ್ದಾರೆ. ನೈನಿತಾಲ್ -ನಲ್ಲಿರುವ ಅಧಿಕಾರ...