ಕಾರ್ಗಿಲ್ ಕದನವೀರರು - 8
ಅಮರ್ ದೀಪ್ ಸಿಂಗ್ ಚಿಕ್ಕವನಿದ್ದಾಗ ನೆರೆಮನೆಗೆ ಓಡಿಹೋಗಿ ಟಿವಿ ಪರದೆಯ ಮೇಲೆ ಮೂಡಿಬರುತ್ತಿದ್ದ ಗಣರಾಜ್ಯೋತ್ಸವದ ಸೈನಿಕರ ಆಕರ್ಷಕ ಪಥಸಂಚಲನವನ್ನು ತಪ್ಪದೆ ನೋಡುತ್ತಿದ್ದ. ಸೈನಿಕರ ಹಸಿರು-ಹಳದಿ ಮಿಶ್ರಿತ ಸಮವಸ್ತ್ರ ಆತನ ಮನಸ್ಸನ್ನು ಸೆರೆಹಿಡಿದಿತ್ತು. ಎಷ್ಟರಮಟ್ಟಿಗೆ ಅಂದರೆ ಮೆಟ್ರಿಕ್ ಶಿಕ್ಷಣ ಮುಗಿಯುವ ಮುನ್ನವೇ ಅಮರ್ ದೀಪ್ ಮಿಲಿಟರಿ ಸೇರಿ ಅಂತಹ ಸಮವಸ್ತ್ರವನ್ನು ತೊಟ್ಟಾಗಿತ್ತು.
ಮನಸ್ಸಿಗೆ ಅನಿಸಿದ್ದನ್ನು ಕೂಡಲೇ ಕಾರ್ಯಗತಗೊಳಿಸುವುದು ಅಮರ್ ದೀಪ್ ಸ್ವಭಾವ. ಮೇ 8 ರಂದು ಆತ ಮಾಡಿದ್ದೂ ಆದೇ ರೀತಿ. ಹಿಮದ ಕಲ್ಲುಬಂಡೆಗಳ ಕೊರಕಲು ಹಾದಿಯಲ್ಲಿ 14 ಸಹಸ್ರ ಅಡಿಗಳೆತ್ತರದ ಕಾರ್ಗಿಲ್ ಪರ್ವತದಲ್ಲಿ ಹವಲ್ದಾರ್ ಜೈಪ್ರಕಾಶ್ ಜೊತೆ ಆತ ಶತ್ರುಪಡೆಯೊಂದಿಗೆ ನಾಲ್ಕು ಗಂಟೆಗೂ ಮಿಕ್ಕಿ ಅವಿರತವಾಗಿ ಹೋರಾಡಿದ. ಎದೆ, ಹೊಟ್ಟೆಯೊಳಗೆ ಗುಂಡುಗಳು ತೂರಿದವು. ಹವಲ್ದಾರ್ ಜೈಪ್ರಕಾಶ್ ಕೂಡಲೇ ಹಿಂದಕ್ಕೆ ಬರುವಂತೆ ಈತನಿಗೆ ಆದೇಶವಿತ್ತರು. ಅಮರ್ ದೀಪ್ ಅದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಕದನದಲ್ಲಿ ಆಗಲೇ ಮಡಿದಿದ್ದ ಉಳಿದಿಬ್ಬರ ದೇಹಗಳನ್ನು ಹೇಗಾದರೂ ತರಬೇಕೆಂದು ಮುಂದುವರೆಯುತ್ತಲೇ ಹೋದ. ಎತ್ತರದಲ್ಲಿ ಶತ್ರುಗಳು ಈತ ಕೆಳಗೆ. ಶತ್ರುಗಳ ಗುಂಡುಗಳು ಈತನ ಇಡೀಯ ದೇಹವನ್ನು ಛಿದ್ರ ವಿಚ್ಛಿದ್ರಗೊಳಿಸಿದವು.ಸಂಗಡಿಗರ ಶವವನ್ನು ತರಲಾಗದ ದು:ಖಕ್ಕೆ ಈತನೂ ಶವವಾಗಿ ಹಿಮದೊಡಲಲ್ಲಿ ತಲೆಯಿಟ್ಟು ಮಲಗಿದ.
ಅಮರ್ ದೀಪ್ ಕಾರ್ಗಿಲ್ ಯುದ್ದ ಪ್ರಾರಂಭವಾದ ಬಳಿಕ ತಾನೊಮ್ಮೆ ಮನೆಗೆ ಬಂದು ಹೋಗುವೆನೆಂದು ಪತ್ರ ಬರೆದಿದ್ದ. ತಂದೆ-ತಾಯಿಗಳಿಗೆ ಈ ಪತ್ರ ಅಚ್ಚರಿ ತಂದಿತ್ತು. ಯುದ್ಧದ ನಡುವೆ ಹೇಗೆ ಬರುತ್ತಾನೆ ? ಇದು ಅವರ ಚಿಂತೆ.
ಆದರೆ ಮೇ 13ರಂದು ಆತ ಮನೆಗೆ ಮರಳಿದಾಗ ತಂದೆ-ತಾಯಿಗಳ ಮುಖದಲ್ಲಿ ಯಾವ ಅಚ್ಚರಿಯೂ ಉಳಿದಿರಲಿಲ್ಲ. ಏಕೆಂದರೆ ಅಂದು ಮನೆಗೆ ಬಂದದ್ದು 24ರ ಹರೆಯದ ಅಮರ್ ದೀಪ್ ಸಿಂಗ್ ತ್ರಿವರ್ಣ ಧ್ವಜ ಸುತ್ತಿದ್ದ ಪಾರ್ಥಿವ ಶರೀರ.
ಹರಿಯಾಣದ ಪಾಣಿಪತ್ ಜಿಲ್ಲೆಯ ಬಿಂಧ್ ಗ್ರಾಮವಿಡೀ ಆ ದಿನ ದು:ಖದಲ್ಲಿ ಮುಳುಗಿತ್ತು. ತಮ್ಮ ಓರಗೆಯ, ತಮ್ಮದೇ ವಯಸ್ಸಿನ ಹುಡುಗನೊಬ್ಬ ಶೌರ್ಯ ಪರಾಕ್ರಮಗಳಿಂದ ಕಾದಾಡಿ ವೀರಸ್ವರ್ಗ ಸೇರಿದ ಘಟನೆ ಆ ಗ್ರಾಮದ ಯುವಕರಿಗೆ ನವಸ್ಫೂರ್ತಿ ನೀಡಿದೆ. ಅಮರ್ ದೀಪ್ ನಂತೆ ತಾವೂ ದೇಶಕ್ಕಾಗಿ ಹೋರಾಡಿ ಹಿರೋವಾಗಬೇಕೆಂದು ನಿರ್ಧರಿಸಿದ್ದಾರೆ.
ಬಾಂದ್ ಗ್ರಾಮ ಮೊದಲಿನಿಂದಲೂ ಸಶಸ್ತ್ರ ಪಡೆಗೆ ಯುವಕರನ್ನು ಕಳಿಸುವುದಕ್ಕೆ ಹೆಸರುವಾಸಿಯಾಗಿದೆ.
ನಾಲ್ಕು ಸಾವಿರ ಜನಸಂಖ್ಯೆಯ ಆ ಹಳ್ಳಿಯಲ್ಲಿ ಈಗಾಗಲೇ ಎರಡು ಡಜನ್ ಯುವಕರು ಮಿಲಿಟರಿ ಸೇರಿದ್ದಾರೆ. ಅಮರ್ ದೀಪ್ ತಮ್ಮ ನಂತರದ ನವ ಪೀಳಿಗೆಯನ್ನೆ ಏಳಿ ದೇಶಕ್ಕಾಗಿ ಬಲಿದಾನ ಮಾಡಿ ಎಂಬಂತೆ ಕರೆ ನೀಡಿದಂತೆ ಆ ಕರೆಗೆ ಯುವಕರು ಓಡೋಡಿ ಬರುತ್ತಿದ್ದಾರೆ.
ಅಮರ್ ದೀಪ್ ಸೈನ್ಯಕ್ಕೆ ಸೇರಿದ ಮೇಲೆ ಮನೆಗೆ ನಿಯಮಿತವಾಗಿ ಹಣ ಕಳಿಸುತ್ತಿದ್ದ. ಎರಡು ಕೋಣೆಗಳ ಮಾಸಿದ ಗೋಡೆಗಳ ತನ್ನ ಪುಟ್ಟ ಮನೆಯನ್ನು ಮುಂದಿನ ಬಾರಿ ಬಂದಾಗ ರಿಪೇರಿ ಮಾಡುವುದಾಗಿ ಭರವಸೆ ನೀಡಿ ಹೋಗಿದ್ದ. ಆದರೆ ಆ ಭರವಸೆ ಮಾತ್ರ ಈಡೇರಲಿಲ್ಲ ಎಂದು ತಂದೆ ಪ್ರೇಮ್ ಸಿಂಗ್ ವಿಷಾದದಿಂದ ನುಡಿಯುತ್ತಾರೆ.
ಅಮರ್ ದೀಪ್ ಸಿಂಗ್ 16 ಗ್ರೆನೆಡಿಯರ್ಸ್ ಗೆ ಸೇರಿದ ವೀರ ಸಿಪಾಯಿ ಅವನ ನೆನಪು ಇನ್ನೂ ಅನೇಕ ಯುವಕರಿಗೆ ಆದರ್ಶವಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಹಸ ಮೆರೆದು ವೀರಸ್ವರ್ಗ ಸೇರಿದ ಪರಕ್ರಾಮಿ ಯೋಧನನ್ನು ಸದಾ ನೆನಪಿಸಿಕೊಳ್ಳಲೇ ಬೇಕು.
,✍️ ಪ್ರಣವ ಭಟ್