ಕಾರ್ಗಿಲ್ ಕದನವೀರರು - 7


ಆ ದಿನ ಉಷಾಶರ್ಮಾಗೆ ರಾತ್ರಿಯೇ ಎಚ್ಚರವಾಯಿತು. ಅಂದು ಜೂನ್ 9. ಎಚ್ಚರವಾದಾಗ ಏನೋ ತಳಮಳ. ಹೇಳತೀರದ ಸಂಕಟ .ಪಕ್ಕದಲ್ಲಿ ನಿದ್ರಿಸುತ್ತಿದ್ದ ತನ್ನ ಪತಿಯನ್ನು ಎಬ್ಬಿಸಿದಳು. ತಮ್ಮಿಬ್ಬರು ಮಕ್ಕಳ ಬಗ್ಗೆ ರಾತ್ರಿ ಅವರಿಬ್ಬರು ಮಾತನಾಡಿಕೊಂಡರು. ಇಬ್ಬರು ಮಕ್ಕಳು ಮಿಲಿಟರಿಯಲ್ಲಿದ್ದರು ಒಬ್ಬ ಫ್ಲೈಟ್ ಲೆಫ್ಟಿನೆಂಟ್ ಅಮನ್ ಕಾಲಿಯಾ ಇನ್ನೊಬ್ಬ ಚಿಕ್ಕವನು ಕ್ಯಾಪ್ಟನ್ ಅಮೋಲ್ ಕಾಲಿಯಾ.

ಇದಾಗಿ ಮೂರು ದಿನಗಳ ನಂತರ ಸ್ಥಳೀಯ ವರ್ತಮಾನ ಪತ್ರಿಕೆಯಲ್ಲಿ ಸುದ್ದಿ ತೇಲಿಬಂತು " ಕಾರ್ಗಿಲ್ ಪರ್ವತ ವಶಪಡಿಸಿಕೊಳ್ಳುವ ಭೀಕರ ಕಾಳಗದಲ್ಲಿ ಭಾರತೀಯ ಕ್ಯಾ. ಅಮೋಲ್ ಕಾಲಿಯಾ. ವೀರ ಸ್ವರ್ಗ ಸೇರಿದ್ದಾರೆ".

"ನನ್ನ ಬಗ್ಗೆ ಚಿಂತಿಸಬೇಡಿ ಈ ತಿಂಗಳ ಕೊನೆಗೆ ನಾನು ದೆಹಲಿಗೆ ಹಿಂದಿರುಗುವ ನಿಮಗೆ ತುಂಬಾ ತುರ್ತಾಗಿದ್ದರೆ ಆಗ ನನ್ನ ಮದುವೆಯನ್ನು ನಿರ್ಧರಿಸಬಹುದು." ಅಮೋಲ್ ತಂದೆ-ತಾಯಿಗೆ ಬರೆದ ಈ ಪತ್ರ ತಲುಪಿದ್ದು ಜೂನ್ 9ರಂದು ಅದೇ ದಿನ ಅಮೋಲ್ ತನ್ನ ಜಮ್ಮು-ಕಾಶ್ಮೀರ ಲೈಟ್ ಇನ್ ಫೆಂಟ್ರಿಯ 40 ಉಳಿದ ಸೈನಿಕರೊಂದಿಗೆ ಹದಿನೆಂಟು ಸಹಸ್ರ ಅಡಿ ಎತ್ತರದ ಹಿಮಾಚ್ಛಾದಿತ ಕಾರ್ಗಿಲ್ ಯಲೋಡೀರ್ ಪ್ರದೇಶದಲ್ಲಿ ಶತ್ರು ಪಡೆಯ ವಿರುದ್ಧ ಭೀಕರ ಕದನದಲ್ಲಿ ತೊಡಗಿದ್ದರು. ಪರ್ವತ ಪ್ರದೇಶದ ಯುದ್ಧದಲ್ಲಿ ಪರಿಣಿತರಾದ ಅಮೋಲ್ ಮತ್ತು ಗೆಳೆಯರನ್ನು  ಯುದ್ಧ ವಿಮಾನ  ಹಿಂದಿನ ದಿನವಷ್ಟೇ ಆ ಪ್ರದೇಶಕ್ಕೆ ತಂದಿಳಿಸಿತ್ತು.

ಆದರೆ ಪಾಕ್ ಸೈನಿಕರು ಅಲ್ಲಿ ಆಗಲೇ ಜಮಾಯಿಸಿದ್ದರು. ವಿಮಾನದಿಂದ ಕೆಳಗಿಳಿದ ಅಮೋಲ್ ಮತ್ತು ಸಂಗಡಿಗರ ಮೇಲೆ ಪಾಕ್ ಸೈನಿಕರಿಂದ ಒಂದೇ ಸಮನೆ ಗುಂಡುಗಳು ಎಗರಾಡಿದವು. ಜೊತೆಗಿದ್ದ ಇಬ್ಬರು ಸಂಗಡಿಗರಿಗೆ ಅಷ್ಟರೊಳಗೆ ಗುಂಡೇಟು ತಗುಲಿತು. ಅಮೋಲ್ ನಿಧಾನವಾಗಿ ತೆವಳುತ್ತಾ ಎಲ್ಎಂಜಿ ಬಂದೂಕಿನತ್ಣ ಕೈಚಾಚಿ ಅದನ್ನು ಕೈಯಲ್ಲಿ ಹಿಡಿದು ಬಂದೂಕು ಚಲಾಯಿಸುತ್ತಾ 20 ಅತಿಕ್ರಮಣಕಾರರನ್ನು ಆಹುತಿ ತೆಗೆದುಕೊಂಡ.

ಆದರೆ ಸುತ್ತಲೆಲ್ಲ ಶತ್ರುಪಡೆ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ಭದ್ರಾ ಕೋಟೆಯ ಒಳಗೆ ನುಗ್ಗಿದವರಿಗೆ ತಪ್ಪಿಸಿಕೊಳ್ಳುವ ಇರಾದೆಯೂ ಇರಲಿಲ್ಲ. ಕಾದಾಡುತ್ತಾ ಮಡಿಯುವುದೊಂದೇ ಅವರಿಗೆ ಗೊತ್ತು. ಆ ದಿನ ನಮ್ಮ ಸೈನಿಕರ ಪಾಲಿಗೆ ಬಹಳ ದುಃಖದ ದಿನ. ಅನೇಕ ಮಂದಿ ಶತ್ರು ಪಡೆಯ ದಾಳಿಗೀಡಾಗಿ ಮಡಿದರು. ಅಮೋಲ್ ಹಾಗೂ ಆತನ 12 ಮಂದಿ ಪರಕ್ರಾಮಿ ಯೋಧರು ಕದನದಲ್ಲಿ ಜೀವ ತೆತ್ತರು. ಆದರೆ ಅದಾದ ಎರಡು ದಿನಗಳ ನಂತರ ಆ ಪ್ರದೇಶವನ್ನು ಭಾರತೀಯ ಸೈನಿಕರು ವಶಪಡಿಸಿಕೊಂಡರು.

ಹಿಮಪರ್ವತದ ಅಡಿ ಬಿದ್ದ ಅಮೋಲ್ ಕಾಲಿಯಾನ ದೇಹವನ್ನು ತತ್ ಕ್ಷಣ ಹುಡುಕಲು ಸಾಧ್ಯವಾಗಲಿಲ್ಲ. ಆದರೆ ಆತನ ಧೈರ್ಯ, ಪರಾಕ್ರಮಗಳ ವೀರಗಾಥೆ ಅದಾಗಲೇ ಆತನ ಊರಿಗೆ ತಲುಪಿತು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ದೆಹಲಿ ಸಮೀಪದ ನಂಗಾಲ್ ಪಟ್ಟಣದ ಮೊದಲ ಪದವೀಧರ ಸೈನಿಕನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನರ ಮಹಾಪೂರವೇ ಹರಿದುಬಂದಿತು.

" ಅಮೋಲ್ ಇಷ್ಟೊಂದು ಪರಾಕ್ರಮಿಯಾಗಬಹುದೆಂದು ನನಗೆಂದೂ ಅನಿಸಿರಲಿಲ್ಲ ನನ್ನ ಪಾಲಿಗೆ ಆತನಿನ್ನೂ ಸಣ್ಣ ಮಗುವಾಗಿದ್ದ" ಎಂದು ತಂದೆ ಎಸ್. ಪಿ ಶರ್ಮಾ ಭಾವುಕರಾಗಿ ನುಡಿಯುತ್ತಾರೆ. ಅವರು ಒಬ್ಬ ಶಾಲಾ ಶಿಕ್ಷಕರು.

"ಮಗನೇ, ಇದೋ ನಿನಗೆ ಹೆಮ್ಮೆಯ ಪ್ರಣಾಮ" ಎಂದು ಶರ್ಮಾ ಮನೆಯ ಗೋಡೆಗೆ ನೇತು ಹಾಕಿರುವ ಮಗನ ಭಾವಚಿತ್ರಕ್ಕೆ ಸೆಲ್ಯೂಟ್ ಹೊಡೆಯುತ್ತಾರೆ. ನಂಗಾಲ್ ಪಟ್ಟಣದ ಯುವಕರೆಲ್ಲಾ ಹೆಚ್ಚಾಗಿ ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾಭ್ಯಾಸಕ್ಕೆ ಹಾತೊರೆಯುವವರು. ಆದರೀಗ ಅಮೋಲ್ ವೀರಮರಣ ಆ ಯುವಕರಿಗೆ ಪುಳಕಿತಗೊಳಿಸಿದೆ. ಸೈನ್ಯಕ್ಕೆ ಸೇರಿ ತಾವು ಕೂಡ ಅಮೋಲ್ ಕಾಲಿಯಾನಂತೆ ಪರಾಕ್ರಮ ಮೆರೆಯಬೇಕು ಎಂಬುದು ಹಲವು ಯುವಕರ‌ ಬಯಕೆ. ಬಹುಶಃ ಒಬ್ಬ ಸೈನಿಕ ಇಡೀಯ ದೇಶಕ್ಕೆ ಮಾದರಿಯಾಗಬಲ್ಲಾ ಎಂಬುದಕ್ಕೆ ಅಮೋಲ್ ಕಾಲಿಯಾ ಸಾಕ್ಷಿ

✍️ ಪ್ರಣವ ಭಟ್ 

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಭಾರತದ ಸಂಸ್ಕೃತಿಯ ಅನಾವರಣ ಇಂಡೋನೇಷ್ಯಾ ನೆಲದಲ್ಲಿ

ಕಾರ್ಗಿಲ್ ಕದನವೀರರು - 8