ಕಾರ್ಗಿಲ್ ಕದನವೀರರು - 6

"ನಾನು ಗುರುತು ಪರಿಚಯವಿರದ, ಇದುವರೆಗೆ ಕಂಡು ಕೇಳರಿಯದ ದೂರದ ಪ್ರದೇಶಕ್ಕೆ ಹೋಗುತ್ತಿರುವೆ. ಇದೊಂದು ಅಪಾಯಕಾರಿ ಸಾಹಸವೇ ಆಗಬಹುದು"

ಲೆಫ್ಟಿನೆಂಟ್ ಕರ್ನಲ್ ಆರ್.ವಿಶ್ವನಾಥನ್ ಪತ್ನಿ ಜಲಜಾಳಿಗೆ ಜೂನ್ 2ರಂದು ಒಂದು ಪತ್ರ ಬರೆದರು. ಆ ಪತ್ರವೇನೋ ಪತ್ನಿಗೆ ತಲುಪಿತು. ಆದರೆ ಪತ್ರ ತಲುಪಿದ ದಿನವೇ ಪತಿಯ ಪಾರ್ಥಿವಶರೀರವೂ ಮನೆಗೆ ಬಂದಿಳಿಯಿತು.

ವಿಶ್ವನಾಥನ್ ಅವರ ಮೂವರು ಸಂಗಡಿಗರು ತೊಲೊಲಿಂಗ್ ನ ಹಿಮಾಚ್ಛಾದಿತ ಪರ್ವತಪ್ರದೇಶದಲ್ಲಿ
ಹೋರಾಡುತ್ತಾ ಮಡಿದಿದ್ದರು. ಅವರ ದೇಹಗಳನ್ನು ಅಲ್ಲಿಂದ ಕೆಳಕ್ಕೆ ಹೇಗಾದರೂ ಒಯ್ಯಬೇಕೆಂದು ವಿಶ್ವನಾಥನ್ ಹೊರಟಿದ್ದರು. ಒಬ್ಬ ಸೈನ್ಯಾಧಿಕಾರಿಯಾಗಿ ಇಷ್ಟನ್ನಾದರೂ ಮಾಡದಿದ್ದರೆ ಹೇಗೆ ?

ಜೂನ್ 2ರಂದು ಕಾರಿರುಳ ರಾತ್ರಿ ವಿಶ್ವನಾಥ ತನ್ನ ಪಡೆಯೊಂದಿಗೆ ಹೊರಟರು. 18 ಗ್ರೆನೆಡಿಯರ್ಸ್ ಪಡೆ ವಿಶ್ವನಾಥನ್ ಜೊತೆ ಹೊರಟಿತು. ಮತ್ತೆ ಅದೇ ಕಥೆ ಪರ್ವತದೆತ್ತರದಲ್ಲಿ ಬಂಕರ್ ಗಳಲ್ಲಿ ಅಡಗಿಕೊಂಡ ಶತ್ರು ಪಡೆ ಕೆಳಗೆ ಕಣಿವೆಯಲ್ಲಿ ಮೇಲೇರುತ್ತಿರುವ ಭಾರತೀಯ ಸೇನೆ. ಏನಾಗಿರಬಹುದೆಂದು ಹೇಳುವ ಅಗತ್ಯವೇ ಇಲ್ಲ.
ಶತ್ರು ಪಡೆಯು ಎಲ್ ಎಂಜಿ ಮೇಶಿನ್ ಗನ್ ಮೂಲಕ ಒಂದೇ ಸಮನೆ ಗುಂಡಿನ ಮೊರೆತ. ಆದರೆ ಇದನ್ನೆಲ್ಲ ವಿಶ್ವನಾಥನ್ ಲೆಕ್ಕಿಸಲಿಲ್ಲ. ಶತ್ರುಪಡೆಯ ಗುಂಡುಗಳು ಅವರ ತೊಡೆ, ತೊಡೆಸಂದಿಗಳನ್ನು ಸೀಳಿದವು. ತೀವ್ರ ವೇದನೆಯಿಂದ ಚಡಪಡಿಸುತ್ತಿದ್ದ ವಿಶ್ವನಾಥನ್ ಅವರನ್ನು ಸಂಗಡಿಗ ಸೈನಿಕರು ದ್ರಾಸ್ ಪ್ರದೇಶದ ಮಿಲಿಟರಿ ಆಸ್ಪತ್ರೆಗೆ ಸಾಗಿಸುವಷ್ಟಲ್ಲಿ ದಾರಿಯಲ್ಲೇ ಆ ವೀರಯೋಧನ ಪ್ರಾಣಪಕ್ಷೀ ಹೊರಟುಹೋಯಿತು.

ಜೂನ್ 3ರಂದು ಕೊಚ್ಚಿಯಲ್ಲಿ ವಿಶ್ವನಾಥನ್ ಅವರ ತಂದೆ ವಿ.ರಾಮಕೃಷ್ಣನ್ ಮನೆಯ ಫೋನ್ ಗುಣುಗುಣಿಸಿತು. ಫೋನ್ ಎತ್ತಿದರೆ 'ನಿಮ್ಮ ಮಗ ಇನ್ನಿಲ್ಲ' ಎಂಬ ಸಂದೇಶ ತೇಲಿ ಬಂತು.

"ವಿಶ್ವನಾಥನ್ ಮೆಚ್ಚಬಹುದಾದ ಒಂದು ಗುಣವೆಂದರೆ ಆತನಿಗೆ ಏನೇ ಕೆಲಸ ಹೇಳಲಿ ತಕ್ಷಣ ವಿಧೇಯನಾಗಿ ಅದನ್ನು ಪಾಲಿಸುತ್ತಿದ್ದ" ಎಂದು ಆತನ ಉಪಾಧ್ಯಾಯಿನಿ ಸುಶೀಲಾ ರಾಮದಾಸ್ ನೆನಪಿಸಿಕೊಳ್ಳುತ್ತಾರೆ. ವಿಶ್ವನಾಥನ್ ತಂದೆ ರಾಮಕೃಷ್ಣನ್ ಗುಂಡುಗಳಿಂದ ಛಿದ್ರವಾಗಿರುವ , ನೆತ್ತರಿನಿಂದ ತೊಯ್ದಿರುವ ತನ್ನ ಮಗನ ಮಿಲಿಟರಿ ಸಮವಸ್ತ್ರವನ್ನು ಈಗ ಸ್ಮಾರಕವಾಗಿ ಜೋಪಾನವಾಗಿ ತೆಗೆದಿಟ್ಟಿದ್ದಾರೆ.

ನಮ್ಮ ಭವಿಷ್ಯದ ಹಿಂದೆ ದೇಶದ ಭವಿಷ್ಯದ ಹಿಂದೆ ಇಂತಹ ಸಾವಿರಾರು ಯೋಧರ ಬಲಿದಾನವೇ ಇದೆ. ಅವರನ್ನು ಸದಾ ನೆನಪಿಸಿಕೊಳ್ಳೋಣ.

✍️ ಪ್ರಣವ ಭಟ್

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾರ್ಗಿಲ್ ಕದನವೀರರು - 7

ಭಾರತದ ಸಂಸ್ಕೃತಿಯ ಅನಾವರಣ ಇಂಡೋನೇಷ್ಯಾ ನೆಲದಲ್ಲಿ

ಕಾರ್ಗಿಲ್ ಕದನವೀರರು - 8