ಕಾರ್ಗಿಲ್ ಕದನವೀರರು - 4
ಕಾರ್ಗಿಲ್ ಕದನದ ಹಿಂದೆ ಅನೇಕ ರೋಚಕ ಘಟನೆಗಳಿವೆ ಸಾಹಸದ ಕಥೆಗಳಿವೆ ಶೌರ್ಯಕ್ಕೆ ಜೀವಂತ ಉದಾಹರಣೆಗಳಿವೆ. ಪ್ರತಿಯೊಬ್ಬ ಯೋಧರ ವೀರಗಾಥೆ ಕಣ್ಣಲ್ಲಿ ನೀರ ಹನಿಗಳನ್ನು ತುಂಬುತ್ತವೆ. ಇಂತಹ ಸಾವಿರಾರು ಯೋಧರ ಬಲಿದಾನವೇ ಈ ಇಂದು ಹೆಮ್ಮ ಪಡುವ ಕಾರ್ಗಿಲ್ ವಿಜಯ ದಿನಕ್ಕೆ ಕಾರಣ ಎಂಬುದು ಮರೆಯುವಂತಿಲ್ಲ.
"ಏಕ್ ಪಲ್ ಮೇ ಹೈ ಸಚ್ ಸಾರೀ ಜಿಂದಗೀ ಕಾ. ಇಸ್ ಪಲ್ ಮೇ ಜೀ ಲೋ ಯಾರನ್ , ಯಹಾಂ ಕಲ್ ಹೈ ಕಿಸನೇ ದೇಖಾ"
ಕ್ಯಾಪ್ಟನ್ ಹನೀಫ್ ಉದ್ದೀನ್ ಆಗಾಗ ಗುನುಗುನಿಸುತ್ತಿದ್ದ ಹಾಡಿದು. ಈ ಹಾಡನ್ನು ಬರೆದಿದ್ದು ಹನೀಫ್ ಸಹೋದರ ಸಮೀರ್. ಹನೀಫ್ ತನ್ನ ಸೈನಿಕ ಗೆಳೆಯರಿಗಾಗಿ ಈ ಹಾಡನ್ನು ಆಗಾಗ ರಾಗವಾಗಿ ಹೇಳುತ್ತಿದ್ದ. 'ಹಾಡು ಹೇಳುವ ಯೋಧ' ಎಂದೇ ಆತ ಎಲ್ಲಾರಿಗೂ ಚಿರಪರಿಚಿತ.
ಕಗ್ಗಲ್ಲಿನ ಹಿಮಬಂಡೆಗಳನ್ನು ತುಳಿಯುತ್ತ, ಬೀಸುವ ಬಿರುಗಾಳಿ ಸಹಿಸುತ್ತ ಶತ್ರುಪಾಳೆಯದತ್ತ ಮುನ್ನಡೆಯಬೇಕಾದ ಕಷ್ಟಕರ ಅಸಹನೀಯ ಕ್ಷಣಗಳಲ್ಲಿ ಆತನ ಗೆಳೆಯರಿಗೆ ಹನೀಫ್ ನ ಸುಶ್ರಾವ್ಯ ಧ್ವನಿಯಿಂದ ಹರಿದು ಬರುತ್ತಿದ್ದ ಹಾಡೇ ಪ್ರೇರಣಾಸೂತ್ರ. ಮರುಭೂಮಿಯಲ್ಲೊಂದು ಓಯಸಿಸ್ ದೊರಕಿದಂತೆ. ಮನೆಯಲ್ಲಿ ಆರಾಮವಾಗಿ ಕುಳಿತು ಟಿವಿ ನೋಡಿದಾಗ ಉಂಟಾಗುವ ಸಂತಸ ಈ ಹಾಡು ಕೇಳಿದಾಗ ಸೈನಿಕರಿಗೆ ಆಗುತ್ತಿತ್ತು. 'ರಣರಂಗದಲ್ಲಿರಲಿ, ಮಿಲಿಟರಿ ಕ್ಯಾಂಪ್ ಗಳಲ್ಲಿರಲಿ ಹನೀಫ್ ಹಾಡುಗಳಿಗೆ ಅಡೆತಡೆಯೇ ಇರಲಿಲ್ಲ. ಹಾಸ್ಯ , ವಿನೋದ , ಹಾಡು ಹಾಗೂ ಪರಾಕ್ರಮ ಆತನ ಜೀವನದ ಅವಿಭಾಜ್ಯ ಅಂಗಗಳು ಎಂದು ಹನೀಫ್ ದೊಡ್ಡಣ್ಣ ನಫೀಸ್ ನೆನಪಿಸಿಕೊಳ್ಳುತ್ತಾರೆ.
ದೆಹಲಿಯ ಶಿವಾಜಿ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ ಬಳಿಕ ಕಂಪ್ಯೂಟರ್ ತರಬೇತಿ. 1996ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಯಾಗಿ ಸೈನ್ಯಕ್ಕೆ ಸೇರಿದ್ದು 1997ರ ಜೂನ್ 7ರಂದು. ಹನೀಫ್ ಬದುಕಿನ ತಾವರೆ ಅರಳಿದ್ದು ಹೀಗೆ
ಕಾರ್ಗಿಲ್ ನ ಕಡಿದಾದ ತುರ್ತುಕ್ ಪರ್ವತ ಪ್ರದೇಶದಲ್ಲಿ ಶತ್ರುಗಳೊಂದಿಗೆ ಹನೀಫ್ ಹಾಗೂ ಆತನ 11 ರಜಪುತಾನಾ ರೈಫಲ್ಸ್ ಪಡೆ ಕೊನೆವರೆಗೂ ಉಗ್ರ ಹೋರಾಟ ನಡೆಸಿದರು. ಇವರ ಬಳಿಯಿದ್ದುದು ಚಿಕ್ಕ ಬಂದೂಕುಗಳು. ಶತ್ರುಗಳಲ್ಲಿ ಅತ್ಯಾಧುನಿಕ ಮೆಶೀನ್ ಗನ್ , ಗ್ರೇನೇಡ್ ಗಳು ಇತ್ತು.
ಒಂದೇ ಸಮನೆ ಶತ್ರುಗಳ ಗುಂಡಿನ ಸುರಿಮಳೆ ಜೊತೆಗೆ ಸಾಯಿಸಿದಷ್ಟೂ ಮುಗಿಯದಿರುವ ಶತ್ರುಸೈನಿಕರು. ಹನೀಫ್ ಹಾಗೂ ಸಂಗಡಿಗರು ಹೆದರದೆ ಕೊನೆವರೆಗೂ ಕಾದಾಡಿದರು. ಶತ್ರುಗಳ ಮದ್ದುಗುಂಡುಗಳು ಹನೀಫ್ ಹಾಗೂ ಆತನ ಜೊತೆಯ ವೀರಸೈನಿಕರನ್ನು ಚಿಂದಿಚಿಂದಿ ಮಾಡಿದವು. ಆದರೆ ತುರ್ತಕ್ ಪರ್ವತ ಪ್ರದೇಶ ಕೊನೆಗೂ ಭಾರತದ ವಶವಾಯಿತು. ರಜಪುತಾನ ರೈಫಲ್ಸ್ ಪಡೆಯ ಸೈನಿಕರ ಬಲಿದಾನ ವ್ಯರ್ಥವಾಗಲಿಲ್ಲ. ಕ್ಯಾಪ್ಟನ್ ಹನೀಫ್ ಉದ್ದೀನ್ ದೇಹ ಪತ್ತೆಯಾಗಿದ್ದು ಮಾತ್ರ ಆತ ಗತಿಸಿ 42 ದಿನಗಳ ಬಳಿಕ
ಹನೀಫ್ ಏಳು ವರ್ಷದ ಬಾಲಕನಿರುವಾಗಲೇ ಆತನ ತಂದೆ ತೀರಿಹೋದರು. ತಾಯಿ ಹೇಮಾ ಅಜೀಜ್ ಒಬ್ಬ ಶಾಸ್ತ್ರೀಯ ಸಂಗೀತಗಾರ್ತಿ. 'ಹನೀಫ್ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ವೈರಿ ಪಡೆಯ ರುಂಡ ಚೆಂಡಾಡುತ್ತ ಮಡಿದನೆಂದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನಾವುದಿದ್ದೀತು?' ಎಂದು ಹನೀಫ್ ತಾಯಿ ವೀರಮಾತೆ ಮಗನ ಸಾಹಸಕ್ಕೆ ಹೆಮ್ಮೆ ಪಡುತ್ತಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಹನೀಫ್ ಹುಟ್ಟುಹಬ್ಬ ಆಗಲಾದರೂ ಆತ ಯುದ್ಧ ಮುಗಿಸಿ 'ಏಕ್ ಪಲ್ ಮೇ ಹೈ ಸಚ್ ಸಾರೀ ಜಿಂದಗೀ...' ಎಂಬ ತನ್ನೊಲವಿನ ಹಾಡು ಹೇಳುತ್ತ ಮನೆಯತ್ತ ಹೆಜ್ಜೆ ಹಾಕಿಯಾನೆಂದು ತಾಯಿ, ಸೋದರರು ಕಾಯುತ್ತಿದ್ದರು. ಆದರೆ ಹಾಯ್ ! ಇನ್ನೆಲ್ಲಿಯ ಹನೀಫ್ ! ಈಗ ಉಳಿದಿರುವುದು ಬರೀ ನೆನಪುಗಳು. ಹನೀಫ್ ಹೇಳುತ್ತಿದ್ದ ಹಾಡು ನಿಜವಾಗಿತ್ತು.
ಯಹಾಂ ಕಲ್ ಹೈ ಕಿಸನೇ ದೇಖಾ ?
ವಂದೇ ಮಾತರಂ
✍️ಪ್ರಣವ ಭಟ್