ಕಾರ್ಗಿಲ್ ಕದನವೀರರು - 5

"ನೀನೇನೂ ಹೆದರಬೇಕಾಗಿಲ್ಲ ನಾನು ಕಾಶ್ಮೀರದಲ್ಲಿ ಮೂರು ವರ್ಷಗಳ ಕಾಲ ಉಗ್ರಗಾಮಿಗಳ ವಿರುದ್ಧ ಹೋರಾಡಿರುವೆ"

ಸೈನಿಕ ಸಮವಸ್ತ್ರದ ತೋಳು ಮಡಚುತ್ತ ಕಂಬನಿ ತುಂಬಿದ ತನ್ನ 20 ರ ಹರೆಯದ ಪತ್ನಿ ಗುರುದಯಾಲ್ ಕೌರ್ ಗೆ ಸಿಪಾಯಿ ಜಸ್ ವಿಂದರ್ ಸಿಂಗ್ ಬೆಚ್ಚನೆಯ ಭರವಸೆಯ ಇತ್ತ ಆತ ಪಾಕ್ ಪಡೆಗಳನ್ನು ಬಲಿ ತೆಗೆದುಕೊಳ್ಳಲು ಕಾರ್ಗಿಲ್ ಯುದ್ಧ ಭೂಮಿಗೆ ಹೊರಟಿದ್ದ.

ಕೌರ್ ಜಸ್ ವಿಂದರ್ ಸಿಂಗ್ ವಿವಾಹವಾಗಿ ಇನ್ನೂ ನಾಲ್ಕು ತಿಂಗಳು ಕಳೆದಿತ್ತಷ್ಟೇ. ಕಂಗಳ ತುಂಬಾ ಮನದ ತುಂಬಾ ಅದೇನೇನೋ ದಾಂಪತ್ಯ ಜೀವನದ ಹೊಂಗನಸುಗಳನ್ನು ತುಂಬಿಕೊಂಡಿದ್ದಳು. ಯುದ್ಧ ಮುಗಿದು ಪತಿ ಮನೆಗೆ ಮರಳಿದರೆ ಸಾಕು ತಾನು ಕಟ್ಟಿಕೊಂಡ ಒಂದಿಷ್ಟು ಕನಸುಗಳಾದರೂ ನನಸಾಗಬಹುದೆಂದು ಎಂದು ಲೆಕ್ಕಾಚಾರ ಹಾಕಿದ್ದುಳು.

ಗುರುದಯಾಲ್ ಕೌರ್ ತನ್ನ ಪತಿ ಜಸ್ ವಿಂದರ್ ಸಿಂಗ್ ನನ್ನು ಮದುವೆಯಲ್ಲಿ ನೋಡಿದ್ದೆಷ್ಟೋ ಅಷ್ಟೇ. ಅದೇ ಆಕೆಯ ದಾಂಪತ್ಯ  ಬದುಕಿನ ಅಮೃತಘಳಿಗೆಗಳು. ಅನಂತರ ಆ ಅಮೃತಘಳಿಗೆಗಳು ಆಕೆಯ ಬಾಳಿನಲ್ಲಿ ಮತ್ತೆಂದೂ ಬರಲಿಲ್ಲ. ಜಸ್ ವಿಂದರ್ ಸಿಂಗ್ ಪ್ಲೈವುಡ್ ಪೆಟ್ಟಿಗೆಯೊಂದರಲ್ಲಿ ಹೆಣವಾಗಿ ಮನೆಯಂಗಳಕ್ಕೆ ಬಂದಿಳಿದಾಗ ಆಕೆ ಆ ಕ್ರೂರ ಸತ್ಯವನ್ನು ಎದುರಿಸಬೇಕಾಯಿತು.

ಜಸ್ ವಿಂದರ್ ಸಿಂಗ್ ತಂದೆ ಜೋಗಿಂದರ್ ಸಿಂಗ್ ಪಂಜಾಬಿನ ಒಬ್ಬ ಅಂಧ ರೈತ. ಮೂರು ಎಕರೆ ಜಮೀನು ಹೊಂದಿರುವ ಆತನಿಗೆ ಮೂವರು ಗಂಡುಮಕ್ಕಳು. ಈ ಜಮೀನು ಮೂವರು ಮಕ್ಕಳ ಬದುಕಿಗೆ ಏನೇನೂ ಸಾಲದೆಂದು ನಿರ್ಧರಿಸಿದ ಕಿರಿಯ ಜಸ್ ವಿಂದರ್ ಸಿಂಗ್ 17ನೇ ವಯಸ್ಸಿನಲ್ಲೇ ಮನೆಬಿಟ್ಟು ಹೊರಟ. ಅವನನ್ನು ಬರಸೆಳೆದು ಅಪ್ಪಿಕೊಂಡಿದ್ದು ಭಾರತೀಯ ಸೇನೆ. ಆತನ ಸಾಹಸ ಬದುಕಿದ ಆಸರೆ ನೀಡಿತು.

ಮೇ 21ರಂದು ಜಸ್ ವಿಂದರ್ ಸಿಂಗ್ ಸಾಹಸದ ಬದುಕಿನ ಕೊನೆಯ ಅಧ್ಯಾಯ. ಆಯಕಟ್ಟಿನ ಟೈಗರ್ ಹಿಲ್ಸ್ ಶತ್ರುಗಳ ವಶದಲ್ಲಿತ್ತು. ಅದನ್ನು ಹೇಗಾದರೂ ವೈರಿಗಳಿಂದ ಬಿಡಿಸಿಕೊಳ್ಳಬೇಕಾಗಿತ್ತು. ಆದರೆ ಅದೇನು ಅಷ್ಟು ಸುಲಭವೇ? ದುರ್ಗಮ ಶಿಖರ. ಕಡಿದಾದ ಹಾದಿ ಶಿಖರದೆತ್ತರದಲ್ಲಿ ಬಂಕರ್ ಗಳಲ್ಲಿ ಮದ್ದುಗುಂಡು ತುಂಬಿಕೊಂಡು ಕಾದಿರುವ ವೈರಿಪಡೆ. 

ವೈರಿ ಪಡೆಯ ಈ ದುರ್ಗಮ ಅಡಗುದಾಣ ಅರಸಿ ಹೊರಟ ಸಿಪಾಯಿ ಜಸ್ ವಿಂದರ್ ಸಿಂಗ್ ಕೊನೆಗೂ ಮೇಲಕ್ಕೆ ತಲುಪಿದ ಟೈಗರ್ ಶಿಖರವೇರಿದ. ಅಷ್ಟರಲ್ಲಿ ಆತನ ಎರಡು ತೊಡೆಗಳಿಗೆ ಎಲ್ಲಿಂದಲೂ ಗುಂಡುಗಳು ಬಂದು ಬಡಿದವು. ತೊಡೆಗಳು ಛಿದ್ರಛಿದ್ರ ಆದರೆ ಮನಸ್ಸು ಮಾತ್ರ ಇನ್ನೂ ಭದ್ರ. ಕೊನೆಯುಸಿರಿನವರೆಗೂ ಕೈಯಲ್ಲಿದ್ದ ಬಂದೂಕು ವೈರಿಪಡೆಯ ಮೇಲೆ ಬೆಂಕಿ ಕಾರುತ್ತಲೇ ಇತ್ತು.

ಗುರುದಯಾಲ್ ಕೌರ್ ಮನೆಯಲ್ಲಿ ಟಿವಿ ಮುಂದೆ ಕುಳಿತಿದ್ದಳು. ಕಾರ್ಗಿಲ್ ಕದನದ ಸುದ್ದಿಗಳನ್ನು ಕಾತರದಿಂದ ಆಲಿಸುತ್ತಿದ್ದಳು. ತನ್ನ ಪತಿ ಸಿಪಾಯಿ ಜಸ್ ವಿಂದರ್ ಸಿಂಗ್ ಬಗ್ಗೆ ಏನಾದರೂ ಸುದ್ದಿ ಅಥವಾ ಚಿತ್ರ ಮೂಡ ಬರುವುದೇ ಎಂದು ಕಾಯುತ್ತಿದ್ದಳು. ಅವಳ ನಿರೀಕ್ಷೆ ಸುಳ್ಳಾಗಲಿಲ್ಲ ಒಂದೆರೆಡು ದಿನಗಳಲ್ಲೇ ಜಸ್ ವಿಂದರ್ ಸಿಂಗ್ ಮನೆಯಂಗಳಕ್ಕೆ ಬಂದಿಳಿದ. ಆದರೆ ಶವವಾಗಿ ಪೆಟ್ಟಿಗೆಯೊಂದರಲ್ಲಿ ಮಲಗಿ. ಪಂಜಾಬಿನ ಧೂಳು ತುಂಬಿದ ಹಳ್ಳಿ ಮುನ್ನೆಯ ಆ ಸಣ್ಣ ಮನೆಯಂಗಳದಲ್ಲಿ ಕುಳಿತು ಆಗಸದತ್ತ ದೃಷ್ಟಿ ನೆಟ್ಟಿರುವ ಕೌರ್ ಈಗ ಮಾನ್ಲವದನೆ.

ಜಸ್ ವಿಂದರ್ ಸಿಂಗ್ ವೀರಮರಣ ಅಪ್ಪಿದಕ್ಕೆ ತಂದೆ ಜೋಗಿಂದರ್ ಗೆ ದು:ಖವಿಲ್ಲ "ಶತ್ರುಪಡೆಯನ್ನು ಹಿಮ್ಮೆಟ್ಟಿಸಲು ಯಾರಾದರೂ ಹೋರಾಡುತ್ತಾ ಸಾಯಲೇಬೇಕು" ಎಂದು ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಾರೆ.

ನಮ್ಮ ಬದುಕಿಗೆ ಇದೊಂದು ಬರಸಿಡಿಲಿನಂತೆ ಬಂದ ಬಳಿಸಿದ ದುರಂತ. ಆದರಿದು ದೇಶಕ್ಕೆ ಉತ್ತಮ ಭವಿಷ್ಯ ತಂದುಕೊಡಬಹುದೇನೋ. ಅದೇ ನಮಗೆ ಈಗ ಉಳಿದಿರುವ ಸಮಾಧಾನ." ದಾಂಪತ್ಯದಲ್ಲಿ ಸವಿಯನ್ನೇ ಉಣ್ಣದ ಕೌರ್ ಉಮ್ಮಳಿಸಿ ಬರುವ ದು:ಖವನ್ನು ತಡೆದೊತ್ತಿ ಹೇಳುತ್ತಾಳೆ.

ಹೌದು ಜಸ್ ವಿಂದರ್ ಸಿಂಗ್ ಬಲಿದಾನ ಕೊನೆಗೂ ವ್ಯರ್ಥವಾಗಲಿಲ್ಲ. ಆದರೆ ಇಂತಹ ನೂರಾರು ಸೈನಿಕರ ಬಲಿದಾನವೇ ಕಾರ್ಗಿಲ್ ವಿಜಯದ ಹಿಂದಿರುವ ಶಕ್ತಿ ಹಾಗೂ ಕಾರಣ.

✍️ಪ್ರಣವ ಭಟ್

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾರ್ಗಿಲ್ ಕದನವೀರರು - 7

ಭಾರತದ ಸಂಸ್ಕೃತಿಯ ಅನಾವರಣ ಇಂಡೋನೇಷ್ಯಾ ನೆಲದಲ್ಲಿ

ಕಾರ್ಗಿಲ್ ಕದನವೀರರು - 8