ಕಾರ್ಗಿಲ್ ಕದನವೀರರು -2

ಹದಿನೆಂಟು ಸಹಸ್ರ ಅಡಿಯತ್ತರಕ್ಕೆ ತಲುಪಿ ವೈರಿ ಪಡೆಯನ್ನು ಚೆಂಡಾಡುವುದು ಅಷ್ಟು ಸುಲಭವಲ್ಲ. ಆದರೆ ಕಾರ್ಗಿಲ್ ಕದನ ಬೇರೆಲ್ಲಾ ಕದನಗಳಿಂದ ಕಠಿಣವಾದದ್ದು ಇಂತಹ ಯುದ್ಧದಲ್ಲಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಎಲ್ಲಾ ಸೈನಿಕರ ಬಗ್ಗೆ ಬರೆದರೆ ದೊಡ್ಡ ಪುಸ್ತಕವೇ ಆಗುವುದರಲ್ಲಿ ಸಂಶಯವಿಲ್ಲ. 

"ನನ್ನ ಪತಿ ಮಾತೃಭೂಮಿಗಾಗಿ ಅತ್ಯಂತ ದೊಡ್ಡ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಪ್ರಾಣ ನೀಡಲು ಅವರೆಂದೂ ಹಿಂಜರಿಯಲಿಲ್ಲ. ದೇಶದ ಅತ್ಯುನ್ನತ ಪದವಿಯನ್ನು ಅಲಂಕರಿಸುವ ರಾಷ್ಟ್ರಪತಿಗಿಂತ ಅವರು ದೊಡ್ಡವರು." ಎಂದು ಬೀನಾ ತನ್ನ ಹುತಾತ್ಮ ಪತಿಯ ಬಗ್ಗೆ ಹೇಳುವ ಸಮಯ ಮೈಯ್ಯೆಲ್ಲಾ ರೋಮಾಂಚನಗೊಳಿಸುತ್ತದೆ.

ಕಾರ್ಗಿಲ್ ನಲ್ಲಿ ಅತಿಕ್ರಮಣಕಾರರನ್ನು ಹೊಡೆದಟ್ಟುವ ಹೋರಾಟದಲ್ಲಿ ಪ್ರಾಣತೆತ್ತ ವೀರಯೋಧ ಫ್ಲೈಟ್ ಲೆಫ್ಟಿನೆಂಟ್ ಮುಹಿಲನ್ ಸುಬ್ರಹ್ಮಣ್ಯಂ ಅವರ ಪತ್ನಿ 27ರ ಹರೆಯದ ಬೀನಾ ತನ್ನ ಪತಿಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುವಾಗ ಆಕೆಯ ಕಣ್ಣುಗಳು ಹನಿಗೂಡುತ್ತವೆ. 

ಮೇ 28 ಶತ್ರುನೆಲೆಯನ್ನು ಧ್ವಂಸಗೊಳಿಸಿ ಮುಹಿಲನ್ ಸುಬ್ರಹ್ಮಣ್ಯಂ ಹಿಂದಿರುಗುತ್ತಿದ್ದರು ಆದರೆ ಅಷ್ಟರಲ್ಲಿ ಮತ್ತೆ ಪಾಕ್ ಸೈನಿಕರ ದಾಳಿ ಮುಹಿಲನ್ ನಡೆಸುತ್ತಿದ್ದ ಯುದ್ಧವಿಮಾನ ನೆಲಕ್ಕುರುಳಿತು. ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣ ನೀಡಿದ ವೀರರು ಸಾಲಿನಲ್ಲಿ ಇವರು ಒಬ್ಬರಾದರು." ಕಾರ್ಗಿಲ್ ಗೆ ಹೋಗುವ ಎರಡು ದಿನಗಳ ಮುಂಚೆ ಮುಹಿಲನ್ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿದ್ದರು. ಗಡಿಭಾಗದಲ್ಲಿ ಉದ್ವಿಗ್ನಸ್ಥಿತಿ ಇರುವುದರಿಂದ ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಿದ್ದರು ನಿನ್ನ ಹಾಗೂ ಮಗನ ಬಗ್ಗೆ ಕಾಳಜಿ ಇರಲಿ ಎಂದು ಹೇಳಿದ್ದರು" ಬೀನಾ ಇದನ್ನು ಈಗಲೂ ನೆನಪಿಸಿ -ಕೊಳ್ಳುತ್ತಾರೆ. ಬೀನಾ ಮೂಲತಃ ಬೆಳಗಾವಿಯವರು ಅವರ ತಂದೆ ಬಿಸಿನೆಸ್ ಮ್ಯಾನ್. ಮುಹಿಲನ್ ಸುಬ್ರಹ್ಮಣ್ಯಂ ತಂದೆ ಸುಬ್ರಹ್ಮಣ್ಯಂ ತಮಿಳುನಾಡಿನ ಕೊಟ್ಟೂರಿನವರಾದರೂ ಇಂಡಾಲ್ ಕಾರ್ಖಾನೆಯಲ್ಲಿ ಉದ್ಯೋಗ ಮಾಡುತ್ತಿದ್ದುದರಿಂದ ಮುಹಿಲನ್ ಹುಟ್ಟಿದ್ದು ಬೆಳೆದಿದ್ದು ಬೆಳಗಾವಿಯಲ್ಲೇ. 

ಬೆಳಗಾವಿಯ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಓದಿದ ಮುಹಿಲನ್ ಬಿ.ಎಸ್.ಸಿ ಪದವಿಗಾಗಿ ಆರ್.ಎಲ್.ಎಸ್ ಕಾಲೇಜು ಸೇರಿದರು. ವಾಣಿಜ್ಯ ಪದವಿ ಪಡೆಯಲು ಬೀನಾ ಲಿಂಗರಾಜು ಕಾಲೇಜು ಸೇರಿದರು. ಬೀನಾ- ಮುಹಿಲನ್ ನಡುವೆ ಪ್ರೇಮವಾಗಿದ್ದು ಆಗಲೇ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮುಹಿಲನ್ 1991 ರಲ್ಲಿ ಇಂಡಿಯನ್ ಏರ್ ಫೋರ್ಸ್ ಸೇರಿ 1996 ಜೂನ್ ತಿಂಗಳಲ್ಲಿ ಇಬ್ಬರು ಬೆಳಗಾವಿಯಲ್ಲೇ ವಿವಾಹ ಮಾಡಿಕೊಂಡರು.ನಂತರ ಜೂನ್ 22 1997ರಲ್ಲಿ ಮಗನ ಜನನವಾಯಿತು ಧ್ರುವ ಎಂದು ಹೆಸರಿಡಲಾಗಿತ್ತು. ಮಗ ಹುಟ್ಟುವಾಗ ಅವರು ಅಸ್ಸಾಂನ ಮೋಹನಬಾರಿಯಲ್ಲಿ ಇದ್ದರು. 

ಅನಂತರ ಉತ್ತರಪ್ರದೇಶದ ಸಾಸ್ವಾ೯ಕ್ಕೆ ಮುಹಿಲನ್ ಸುಬ್ರಹ್ಮಣ್ಯಂ ನನ್ನು ವರ್ಗಾಯಿಸಿದರು ಕಾರ್ಗಿಲ್ ಯುದ್ದ ಪರಿಸ್ಥಿತಿ ಉಂಟಾದಾಗ ಟ್ರೂಪ್ ಗಳನ್ನು ತಾತ್ಕಾಲಿಕವಾಗಿ ಶ್ರೀನಗರಕ್ಕೆ ಕಳಿಸುಲಾಗಿತ್ತು.ಮೇ 17 ಕ್ಕೆ ಮುಹಿಲನ್ ಶ್ರೀನಗರಕ್ಕೆ ಹೊರಟ್ಟಿದ್ದರು. ನಾನು ಅವರಿಗೆ ಇಷ್ಟವಾದ ಪದಾರ್ಥ ಮಾಡಿದ್ದೆ. ಆದರೆ ತರಾತುರಿಯಲ್ಲಿ ಆತ ರುಚಿ ನೋಡಿ ಎಂದೂ ಹಿಂದಿರುಗಿ ಬಾರದು ಸ್ಥಳಕ್ಕೆ ಹೊರಟುಹೋದ" ಎಂದು ಬೀನಾ ನೆನಪಿಸಿಕೊಳ್ಳುವಾಗ ಕಣ್ಣೀರು ಹರಿಯುತ್ತದೆ. 

ಮೇ 27 ರಂದು ನನ್ನ ಮನಸ್ಸಿನಲ್ಲಿ ಏನೋ ತಳಮಳ ವಾಗುತ್ತಿತ್ತು ನನ್ನ ಗಂಡನಿಗೆ ದೇವರೆಂದು ಪ್ರಾರ್ಥಿಸುತ್ತಿದ್ದೆ. ಈ ಮಧ್ಯೆ ಎಂಐ-17 ಏರ್ ಕ್ರಾಫ್ಟ್ ನ್ನು ಪಾಕಿಸ್ತಾನಿಗಳು ಹೊಡೆದುರುಳಿಸಿದ್ದಾರೆ ಎಂಬ ಸುದ್ದಿ ಕೇಳಿಬಂತು ಆದರೆ ಮುಹಿಲನ್ ಆ ಏರ್ ಕ್ರಾಫ್ಟ್ ಕ್ಯಾಪ್ಟನ್ ಆಗಿದ್ದರು ಎಂಬ ಅರಿವು ನನಗಿರಲಿಲ್ಲ. ಕಾರ್ಗಿಲ್ ಗೆ ಹೋಗುವಾಗ ತನ್ನನ್ನು ಕ್ಯಾಪ್ಟನ್ ಮಾಡಿದ್ದಾರೆ ಎಂದು ಕೂಡಲೇ ಮುಹಿಲನ್ ಆನಂದತುಂದಿಲನಾಗಿದ್ದ. ತನ್ನ ಸ್ನೇಹಿತರಿಗೆಲ್ಲ ಪಾರ್ಟಿ ನೀಡಿದ್ದ ಆತ ಹಿಂದಿರುಗಿ ಬರದಿದ್ದರೂ ತನ್ನ ಗುರಿ ಸಾಧಿಸಿದ್ದಾನೆ. ಶತ್ರುನೆಲೆಯನ್ನು ಧ್ವಂಸಗೊಳಿಸಿದ್ದಾನೆ" ತನ್ನ ಪತಿಯ ಬಗ್ಗೆ ಬೀನಾ ಹೇಳುವ ಹೆಮ್ಮೆಯ ನುಡಿ ಕೇಳುವಾಗ ರೋಮಾಂಚನ ಆಗುತ್ತದೆ.

ಪತಿಯನ್ನು ಕಳೆದುಕೊಂಡ ಬೀನಾ ಕಂಗೆಟ್ಟಿಲ್ಲ. ಬದುಕಿನಲ್ಲಿ ಸಂಪೂರ್ಣ ಅಂಧಕಾರ ಕವಿದಿದೆಯೆಂದು ಆಕೆಗೆ ಅನಿಸಿಲ್ಲ. ಕತ್ತಲೆಯ ಮಧ್ಯೆಯೂ ಜ್ಯೋತಿಯೊಂದು ಕಾಣುತ್ತಿದೆ. 'ಬ್ರೈಲ್ ಲಿಪಿ ಕಲಿತು ಅಂಧರ ಶಾಲೆಯಲ್ಲಿ ಶಿಕ್ಷಕಿಯಾಗುತ್ತೇನೆ. ಹಾಗೇ ಮಾಡಿದರೆ ಮುಹಿಲನ್ ಸಹ ಸಂತಸಗೊಳ್ಳುತ್ತಾರೆ' ಎನ್ನುವ ವಿಶ್ವಾಸ ಆಕೆಗಿದೆ.

ಇಂತಹ ವೀರಯೋಧರ ಹೆಂಡತಿ ತಾಯಿ ಎಲ್ಲಾರೂ ಕೂಡ ವೀರಮಾತೆಯೇ ಸರಿ...

ವಂದೇ ಮಾತರಂ
✍️ಪ್ರಣವ ಭಟ್

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾರ್ಗಿಲ್ ಕದನವೀರರು - 7

ಭಾರತದ ಸಂಸ್ಕೃತಿಯ ಅನಾವರಣ ಇಂಡೋನೇಷ್ಯಾ ನೆಲದಲ್ಲಿ

ಕಾರ್ಗಿಲ್ ಕದನವೀರರು - 8